ವಿಂಧ್ಯನ್ ಸ್ತೋಮಗಳು
	ಬಿಹಾರ ರಾಜ್ಯದ ಡೆಹ್ರಿ ಅನಸಾನ್‍ನಿಂದ ಮಧ್ಯಪ್ರದೇಶ ರಾಜ್ಯದ ಹೊಷಂಗಾಬಾದ್‍ವರೆಗೂ ರಾಜಸ್ತಾನ ರಾಜ್ಯದ ಚಿತ್ತೂರ್‍ಘಡದಿಂದ ಉತ್ತರಪ್ರದೇಶ ರಾಜ್ಯದ ಆಗ್ರದವರೆಗೂ ಬುಂದೆಲ್ ಖಂಡ್ ಬ್ಯಾಥೊಲಿಕ್‍ನ ಸುತ್ತಲೂ ಸು. 64,373.8 ಚ.ಕಿಮೀ ಪ್ರದೇಶದಲ್ಲಿ ರೂಪುಗೊಂಡಿರುವ ಶಿಲಾಸ್ತೋಮ. ಡೆಕನ್‍ಟ್ರಾಪ್ ಶಿಲೆಯ ಕೆಳಗೆ ಸು. 64,750 ಚ.ಕಿಮೀ ಪ್ರದೇಶದಲ್ಲಿ ಈ ನಿಕ್ಷೇಪಗಳು ಇರಬಹುದೆಂದು ಭೂವಿe್ಞÁನಿ ಓಲ್ಡ್‍ಹ್ಯಾಮ್ (1858-1936) ಅಂದಾಜು ಮಾಡಿದ್ದಾನೆ. 

	ಷಾನ್‍ನದಿಕಣಿವೆಯಲ್ಲಿ ವಿಂಧ್ಯನ್ ಶಿಲಾಸ್ತೋಮದ ಕೆಳಭಾಗ ಅತ್ಯುತ್ತಮ ಸ್ಥಿತಿಯಲ್ಲಿ ನಿಕ್ಷೇಪಗೊಂಡಿದೆ. ಈ ಶಿಲಾಭಾಗಕ್ಕೂ ಅದರ ಕೆಳಗಿರುವ ಸಮಕಾಲೀನ ಶಿಲೆಗಳಿಗೂ ಮಧ್ಯೆ ಅನನುರೂಪ್ಯತೆಯನ್ನು ಕಾಣಬಹುದು. ವಿಂಧ್ಯನ್ ಸ್ತೋಮಗಳು ಕಡಪಶಿಲೆಗಳಷ್ಟು ಅಸ್ತವ್ಯಸ್ತ ವಾಗಿಲ್ಲವಾದರೂ ಇವೆರಡು ಶಿಲಾಗುಂಪುಗಳ ಅಸ್ತವ್ಯಸ್ತತೆ ಒಂದೇ ರೀತಿ ಇದೆ. 

	ಧಾರವಾಡಯುಗದ (ಸುಮಾರು 1 ಬಿಲಿಯನ್ ವರ್ಷಪೂರ್ವದಲ್ಲಿ) ಅನಂತರ ಉಂಟಾದ ಪ್ರಚಂಡ ಪ್ರಳಯದ ಪರಿಣಾಮವಾಗಿ ಧಾರವಾಡ ಶಿಲಾಸ್ತೋಮಗಳು ಅನೇಕ ವಿಧವಾದ ಕ್ಲಿಷ್ಟರೀತಿಯ ಮಡಿಕೆಗಳಾಗಿ ಮಾರ್ಪಟ್ಟು ಬೆಟ್ಟಗಳಾದುವು. ಅವುಗಳ ಪೈಕಿ ಮುಖ್ಯವಾದುದು ಅರಾವಳಿ ಬೆಟ್ಟ. ಇಂಡಿಯ ಪರ್ಯಾಯದ್ವೀಪ ಭಾಗದಲ್ಲಿ ಇದಕ್ಕಿಂತಲೂ ಮಹತ್ತರವಾದ ಭೂಚಲನೆ ಮತ್ತೆ ಯಾವಾಗಲೂ ನಡೆಯಲಿಲ್ಲವೆಂದು ಹೇಳಲಾಗಿದೆ. ಧಾರವಾಡ ಭೂಚಲನೆಯ ಅನಂತರ ಬಹಳ ಕಾಲದತನಕ ಶಿಲಾಶಿಥಿಲೀಕರಣ ನಡೆಯಿತು. ಭೂಇತಿಹಾಸದ ಈ ಭಾಗ ಈಪಾರ್ಕೀಯನ್ ಅನನುರೂಪ್ಯತೆಯಿಂದ ಪ್ರತಿನಿಧಿಸಲ್ಪಟ್ಟಿದೆ. ಇದಾದ ಮೇಲೆ ಮತ್ತೆ ನಿಕ್ಷೇಪಕಾರ್ಯ ಪ್ರಾರಂಭವಾಯಿತು. ಕಡಪ, ಕರ್ನೂಲು ಜಿಲ್ಲಾಭಾಗಗಳು; ವಿಂಧ್ಯಪರ್ವತ ಪ್ರದೇಶ; ಬೆಳಗಾಂವಿ, ಬಿಜಾಪುರ ಮತ್ತು ಗುಲ್ಬರ್ಗ ಜಿಲ್ಲೆಗಳ ಕೆಲವು ಭಾಗಗಳು ಜಲನಿಧಿಗಳಾಗಿ ಅಲ್ಲಿ ಶಿಲಾನಿಕ್ಷೇಪವಾಗಿವೆ. ಈ ಶಿಲಾಸ್ತೋಮಗಳು ಉತ್ತರ ಅಮೆರಿಕದ ಆಲ್ಗೋಂಕಿಯನ್ ಯುಗ ಮತ್ತು ಕೇಂಬ್ರಿಯನ್ ಆದಿಕಾಲಕ್ಕೆ ಸರಿದೂಗುತ್ತವೆ. ಇದನ್ನು ಭೂಇತಿಹಾಸದಲ್ಲಿ ಆದಿಜೀವಕಲ್ಪ ಎಂದು ಕರೆದಿದ್ದಾರೆ. 

	ಆದಿಜೀವಕಲ್ಪಕ್ಕೆ ಭಾರತದಲ್ಲಿ ಸಂವಾದಿಯಾಗಿರುವಂಥದನ್ನು ಪುರಾಣ ಯುಗ ಎಂದು ಭೂವಿe್ಞÁನಿ ಹಾಲೆಂಡ್ ತಿಳಿಸಿದ್ದಾನೆ. ಪುರಾಣಯುಗವನ್ನು ಭಾರತದಲ್ಲಿ ಎರಡು ಭಾಗಗಳಾಗಿ ವಿಭಜಿಸಲಾಗಿದೆ: ಆದಿಪುರಾಣಯುಗ ಮತ್ತು ಅಂತ್ಯಪುರಾಣಯುಗ. ಅಂತ್ಯಪುರಾಣಯುಗದಲ್ಲಿ ವಿಂಧ್ಯನ್ ಪರ್ವತ ಪ್ರದೇಶ, ಕರ್ನೂಲು ಜಿಲ್ಲೆ ಮತ್ತು ಕರ್ನಾಟಕ ರಾಜ್ಯದ ಗುಲ್ಬರ್ಗ ಜಿಲ್ಲೆಗಳಲ್ಲಿ ಶಿಲಾನಿಕ್ಷೇಪಕಾರ್ಯ ನಡೆದಿದೆ. ಇವುಗಳಲ್ಲಿ ವಿಂಧ್ಯನ್ ಪರ್ವತಪ್ರದೇಶ ಶಿಲಾಸ್ತೋಮ ಪೂರ್ಣಕಾಲವನ್ನು ಪ್ರತಿನಿಧಿüಸುತ್ತದೆ. 

	ಈ ಶಿಲಾರಾಶಿಗಳಲ್ಲಿ ಎಲ್ಲಿಯೋ ಅಲ್ಲೊಂದು ಇಲ್ಲೊಂದು ಜೀವರಾಶಿ ಇತ್ತೆಂದು ತೋರುವ ಕೆಲವೊಂದು ಕುರುಹುಗಳನ್ನು ಬಿಟ್ಟರೆ ಇವು ಸಂಪೂರ್ಣವಾಗಿ ಜೀವ್ಯವಶೇಷರಹಿತವಾದುವು ಎನ್ನಲಾಗಿದೆ. ಭೂವಿe್ಞÁನಿ ಎಚ್. ಸಿ. ಜೋನ್ಸ್ ಎಂಬವನು ಸೌಕತ್ ಜೇಡುಶಿಲೆಗಳಲ್ಲಿ ಮತ್ತು ರಾಮಪುರ ಪ್ರದೇಶಗಳಲ್ಲಿ ಕೆಲವು ಜೀವಿಗಳ ಮುದ್ರೆಗಳನ್ನು ಪತ್ತೆಮಾಡಿ ಅವು ಬ್ರ್ಯಾಕಿಯೊಪೋಡದ ಗುಂಪಿಗೆ ಸೇರಿದುವೆಂದು ಹೇಳಿದ್ದಾನೆ. ಭೂವಿe್ಞÁನಿ ಎಂ. ಆರ್. ಸಹನಿ, ಮಿರ್ಜಾಪುರ ಜಿಲ್ಲೆಯ ಕೆಹನ್‍ಜುವ ಮತ್ತು ರೊಹ್ತಾಸ್ ಶಿಲೆಗಳಲ್ಲಿ ಕ್ರಿಷ್ಣಾನಿಯ ಎಂಬ ಬ್ರ್ಯಾಕಿಯೊಪೋಡ ಮತ್ತು ಕೆಲವು ಸಸ್ಯಾವಶೇಷಗಳು ಇರುವುದನ್ನು ವರದಿಮಾಡಿದ್ದಾರೆ. ಇವು ಉತ್ತಮ ಸ್ಥಿತಿಯಲ್ಲಿ ರಕ್ಷಿಸಲ್ಪಟ್ಟಿಲ್ಲವಾದ್ದರಿಂದ ಇವನ್ನು ಗುರುತಿಸಿ ವರ್ಗೀಕರಿಸಲು ಸಾಧ್ಯವಾಗಿಲ್ಲ. ಅಗಾಧ ಸುಣ್ಣಶಿಲಾನಿಕ್ಷೇಪ, ಇಂಗಾಲ ದಿಂದ ಕೂಡಿದ ಜೇಡುಶಿಲೆ, ಗ್ಲಾಕೊನೈಟ್ ಮರಳುಶಿಲೆ ಮತ್ತು ಒಂದು ಬಗೆಯ ಕಲ್ಲಿದ್ದಲಿನ ವಸ್ತುಗಳು ಜಾಪ್ಲಾ ಎಂಬ ಸ್ಥಳದಲ್ಲಿ ಕೈಮೂರ್ ಶಿಲಾಶ್ರೇಣಿಯ ತಳಭಾಗದಲ್ಲಿ ದೊರಕುತ್ತವೆ. ಇವೆಲ್ಲ ಆಗಿನ ಕಾಲದಲ್ಲಿ ಜೀವರಾಶಿ ಇತ್ತೆಂಬುದಕ್ಕೆ ಪರೋಕ್ಷ ನಿದರ್ಶನಗಳು.    

	ವಿಂಧ್ಯಶಿಲಾ ಸ್ತೋಮಗಳನ್ನು ಕೆಳಭಾಗ ಮತ್ತು ಮೇಲ್ಭಾಗಗಳಾಗಿ ವಿಂಗಡಿಸಲಾಗಿದೆ. ಇವು ಅಸಮ ಭಾಗಗಳು. ಇವೆರಡಕ್ಕೂ ಮಧ್ಯೆ ದೀರ್ಘಕಾಲವನ್ನು ಸೂಚಿಸುವ ಅನನುರೂಪ್ಯತೆ ಇರುವುದೇ ಈ ವಿಭಜನೆಗೆ ಆಧಾರ. ಇದರ ಜೊತೆಗೆ ಇವುಗಳ ಶಿಲಾಸಂಯೋಜನೆಯಲ್ಲೂ ವ್ಯತ್ಯಾಸವಿದೆ. ಕೆಳಭಾಗ ಭೂಚಲನೆಗೆ ಒಳಪಟ್ಟು ಮಡಿಕೆಗಳಾಗಿದೆ. ಮೇಲ್ಭಾಗ ಈ ರೀತಿ ಇಲ್ಲ. ಮೇಲ್ಭಾಗವನ್ನು ಮತ್ತೆ ಎರಡು ಭಾಗಗಳಾಗಿ ವಿಭಜಿಸಲಾಗಿದೆ. ಪ್ರತಿ ಎರಡರ ಮಧ್ಯೆ ಅನನುರೂಪ್ಯತೆ ಇದೆ. ಪ್ರತಿಯೊಂದು ಭಾಗವೂ ಗುಂಡುಶಿಲೆಯಿಂದ ಪ್ರಾರಂಭವಾಗುತ್ತದೆ. ಈ ಸ್ತೋಮಗಳ ಶಿಲಾವಿಂಗಡಣೆಯ ಪಟ್ಟಿ ಈ ಮುಂದಿನಂತೆ ಇದೆ:

	ಮೇಲಿನ ಭಂದರ್ ಮರಳುಶಿಲೆ, ಸಿರ್ಬು 
  	ಜೇಡುಶಿಲೆ, ಕೆಳ ಭಂದರ್ ಮರಳುಶಿಲೆ, 		ಭಂದರ್ ಸುಣ್ಣಶಿಲೆ, ಗಾಣೂರ್‍ಘರ್		ಜೇಡುಶಿಲೆ
	ವಜ್ರಗಳಿಂದ ಕೂಡಿದ ಗುಂಡುಶಿಲೆ
	ಮೇಲಿನ ರೇವಾ ಮರಳುಶಿಲೆ, ಝಿರಿ
	ಜೇಡುಶಿಲೆ, ಕೆಳ  ರೇವಾ  ಮರಳುಶಿಲೆ,  		ಪನ್ನ  ಜೇಡುಶಿಲೆ
	ವಜ್ರಗಳಿಂದ ಕೂಡಿದ ಗುಂಡುಶಿಲೆ
	ಮೇಲ್ಭಾಗ:	ದಂಡ್ರಾಲ್ ಜೇಡುಶಿಲೆ, 	
	ಇಳಿಜಾರು ಪ್ರದೇಶದಲ್ಲಿ   			ನಿಕ್ಷೇಪಗೊಂಡ 
	ಮರಳುಶಿಲೆ ಮತ್ತು  			ಗುಂಡುಶಿಲೆ		
	ಕೆಳಭಾಗ:	ಬಿಜೈಘರ್ ಜೇಡುಶಿಲೆ, 			
	ಮೇಲ್ಭಾಗದ ಬೆಣಚುಶಿಲೆ 	  	ಮತ್ತು ಮರಳುಶಿಲೆ,
	ಸುಸ್ನಾಯ್ ಚೂರು ಕಲ್ಲುಶಿಲೆ,
	ಕೆಳಬೆಣಚುಶಿಲೆ ಮತ್ತು  ಜೇಡುಶಿಲೆ
	ರೋಹ್ತಾಸ್ ಶಿಲಾವರ್ಗ: ಸುಣ್ಣಶಿಲೆ  			ಮತ್ತು ಜೇಡುಶಿಲೆಗಳ  ಪುನರಾವೃತ್ತಿ
	ಖೈನ್ಜುವ ಶಿಲಾವರ್ಗ: ಗ್ಲಾಕೊನೈಟ್ 			ಪದರಗಳು, ಕಾಕಿ ಸುಣ್ಣಶಿಲೆ ಮತ್ತು
		ಆಲೀವ್ ಜೇಡುಶಿಲೆ
	ಪೋರ್ಸೆಲ್ಲನೈಟ್ ಶಿಲಾವರ್ಗ: 				ಪೊರ್ಸೆಲ್ಲನೈಟ್ ಮತ್ತು ಸಿಕತಗೊಂಡ 			ಶಿಲೆಗಳು
	ತಳಶಿಲಾವರ್ಗ : ಕಜ್ರುಹಾತ್ ಸುಣ್ಣಶಿಲೆ 
		ಮತ್ತು ತಳಗುಂಡುಶಿಲೆ

	ಕೆಳವಿಂಧ್ಯನ್ ಶಿಲಾಸಮುದಾಯ ಅಥವಾ ಸೆಮ್ರಿಶಿಲಾಶ್ರೇಣಿ: ಷಾನ್ ಮತ್ತು ನರ್ಮದಾ ನದಿಗಳ ಮಧ್ಯೆ, ಸಸಾರಾಮ್‍ಗೆ ಪಶ್ಚಿಮದಲ್ಲಿ ಕೈಮೂರ್ ಬೆಣಚುಶಿಲೆಗಳ ಕೆಳಗೆ ಸೆಮ್ರಿಶಿಲಾಶ್ರೇಣಿ ಇದೆ. ಇದು 386.3 ಕಿಮೀ ಉದ್ದವಾಗಿಯೂ ಪಶ್ಚಿಮದಲ್ಲಿ 24 ಕಿಮೀ ಅಗಲವಾಗಿಯೂ ಇದೆ.  ಪೂರ್ವಕ್ಕೆ ಹೋದಂತೆಲ್ಲ ಅಗಲ ಚಿಕ್ಕದಾಗುತ್ತ ಕೊನೆಗೆ ಸು. 3ಕಿಮೀ ಆಗುತ್ತದೆ. ಗ್ಲಾಕೊನೈಟ್ ಮರಳು ಶಿಲೆಗಳು ಮತ್ತು ಅವುಗಳ ಲ್ಲಿರುವ ಅಲೆಗಳ ಗುರುತು ಇತ್ಯಾದಿ ಚಿಹ್ನೆಗಳು ಆಳವಿಲ್ಲದ ಜಲಧಿಯ ವಾತಾವರಣವನ್ನು ಸೂಚಿಸುತ್ತವೆ. ಕಾಕಿ ಸುಣ್ಣಶಿಲೆ ಬಿಹಾರದ ಸಿಮೆಂಟ್ ಕಾರ್ಖಾನೆಗೆ ರವಾನೆಯಾಗುತ್ತಿದೆ. ಷಾನ್ ಪ್ರದೇಶದಲ್ಲಿ ಸೆಮ್ರಿಶಿಲಾಶ್ರೇಣಿ ಡಾಲರೈಟ್ ಮತ್ತು ಬೆಸಾಲ್ಟ್‍ಗಳ ಅಂತಸ್ಸರಣದಿಂದ ಉಂಟಾದದ್ದು. ಈ ಕಾಲದ ಶಿಲೆಗಳು ರಾಜಸ್ತಾನದಲ್ಲಿ ಟೆರೋಹಾನ್ ಸುಣ್ಣಶಿಲೆ ಗಳಿಂದಲೂ ಚಿತ್ತೋರ್-ಝಲ್ರಾಪಟ್ಟನ್ ಸಮೀಪ 304.8 ಕಿಮೀ ದಪ್ಪದ ನಿಂಬಹೆರ ಜೇಡುಶಿಲೆ, ನಿಂಬಹೆರ ಸುಣ್ಣಶಿಲೆ ಮತ್ತು ಸೂಕೆಟ್ ಜೇಡುಶಿಲೆ ಗಳ ನಿಕ್ಷೇಪದಿಂದಲೂ ಪ್ರತಿನಿಧಿತವಾಗಿವೆ. ಆಂಧ್ರಪ್ರದೇಶದ ಕುಂದೇರ್ ಪ್ರದೇಶ ಮತ್ತು ಪಲ್ನಾಡ್ ಪ್ರದೇಶಗಳಲ್ಲಿ ನಿಕ್ಷೇಪಗೊಂಡಿರುವ ಕರ್ನೂಲು ಶಿಲಾಶ್ರೇಣಿ ಸೆಮ್ರಿಶಿಲಾಶ್ರೇಣಿಗೆ ಸರಿದೂಗುವುದೆಂದು ಲೆಕ್ಕಹಾಕಲಾಗಿದೆ. ಕರ್ನಾಟಕ ರಾಜ್ಯದ ಬಿಜಾಪುರ ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿ ಭೀಮಾ ನದಿಯ ಪಾತ್ರದಲ್ಲಿ ಆರ್ಕೇಯನ್ ಶಿಲಾಸ್ತೋಮಗಳ ಮೇಲೆ ಅನನು ರೂಪ್ಯತೆ ಹೊಂದಿ, ನಿಕ್ಷೇಪಗೊಂಡಿರುವ ಭೀಮಾಶಿಲಾಶ್ರೇಣಿ ಕೂಡ ಸೆಮ್ರಿಶಿಲಾಶ್ರೇಣಿಯ ಸಮಕಾಲೀನವೆಂದು ಅಭಿಪ್ರಾಯಪಡಲಾಗಿದೆ. 

	ಕೈಮೂರ್ ಶಿಲಾಶ್ರೇಣಿ: ಷಾನ್ ಪ್ರದೇಶದಲ್ಲಿಯ ಕೈಮೂರ್ ಶಿಲಾ ಶ್ರೇಣಿ ತಳಭಾಗದಲ್ಲಿ ಬೆಣಚುಶಿಲೆ ಮತ್ತು ಜೇಡುಶಿಲೆಗಳಿಂದ ಕೂಡಿದೆ. ಇಲ್ಲಿ ಪ್ರವಾಹ ಪದರು, ಅಲೆಗಳ ಗುರುತು ಮತ್ತು ಒಣಕಲು ಬಿರುಕುಗಳನ್ನು ಕಾಣಬಹುದು. ಅಮಜೋರ್, ಬಂಜಾರಿ ಮತ್ತು ಡೆಹಿಅನ್‍ಸಾನ್ ಪ್ರದೇಶಗಳ ಕೆಲವುಕಡೆ ಸು. 90 ಸೆಂಮೀಗಳಷ್ಟು ದಪ್ಪಕ್ಕೆ ನಿಕ್ಷೇಪಗಳಿವೆ. ಅದರಲ್ಲಿ ಗಂಧಕದ ಅಂಶ ಸೇ. 40ರಷ್ಟು ಇರುವುದು ಆರ್ಥಿಕವಾಗಿಯೂ ಉಪಯುಕ್ತವಾಗಿದೆ.

	ರೇವಾ ಶಿಲಾಶ್ರೇಣಿ: ಕೈಮೂರ್ ಶಿಲಾಶ್ರೇಣಿಯ ಮೇಲೆ ರೇವಾಶಿಲಾ ಶ್ರೇಣಿ ನಿಕ್ಷೇಪಗೊಂಡಿದೆ. ಇವೆರಡರ ಮಧ್ಯೆ ಗುಂಡುಶಿಲಾ ಪದರವಿದೆ. ಇದು ವಜ್ರಭರಿತವಾಗಿದೆ. ವಿಂಗಡಣಾಪಟ್ಟಿಯಲ್ಲಿರುವಂತೆ ಜೇಡುಶಿಲೆ, ಮರಳುಶಿಲೆಗಳು ಎರಡು ಸಾರಿ ಪುನರಾವೃತ್ತಿಯಾಗುವವು. 

	ಭಂದರ್ ಶಿಲಾಶ್ರೇಣಿ : ವಿಂಧ್ಯಾಶಿಲಾಸ್ತೋಮದ ಅತ್ಯಂತ ಮೇಲ್ಭಾಗಕ್ಕೆ ಭಂದರ್ ಶಿಲಾಶ್ರೇಣಿ ಎಂದು ಹೆಸರು. ಇದು ರೇವಾ ಶಿಲಾಶ್ರೇಣಿಯ ಮೇಲೆ ಕ್ರಮವಾಗಿ ಜೇಡುಶಿಲೆ, ಸುಣ್ಣಶಿಲೆ, ಮರಳುಶಿಲೆ, ಜೇಡುಶಿಲೆ ಮತ್ತು ಮರಳುಶಿಲೆಗಳು ನಿಕ್ಷೇಪಗೊಂಡಿವೆ. ಮರಳುಶಿಲೆಗಳು ಅತ್ಯಂತ ಸೂಕ್ಷ್ಮ ಮರಳುಕಣಗಳಿಂದ ಕೂಡಿರುವುದು ಮಾತ್ರವಲ್ಲದೆ ನಯನಮ ನೋಹರ ಬಣ್ಣಗಳನ್ನೂ ಪ್ರದರ್ಶಿಸುತ್ತವೆ. ಆದ್ದರಿಂದ ಇವನ್ನು ಕಟ್ಟಡ ಕಲ್ಲುಗಳಾಗಿ ಬಳಸುವುದಿದೆ. 

	ಕೆಂಪು ಮರಳುಶಿಲೆ, ಜಿಪ್ಸಮ್ ನಿಕ್ಷೇಪ ಮುಂತಾದವು ಮರುಭೂಮಿ ವಾಯುಗುಣವಿದ್ದುದನ್ನು  ಸೂಚಿಸುತ್ತವೆ. ಪ್ರವಾಹ ಪದರ, ಅಲೆಗಳ ಗುರುತು ಮುಂತಾದವು ಆಳವಿಲ್ಲದ ಪ್ರದೇಶದಲ್ಲಿ ನಿಕ್ಷೇಪಗೊಂಡದ್ದನ್ನು ಸೂಚಿಸುತ್ತವೆ. ಕೈಮೂರ್ ಮತ್ತು ಭಂದರ್ ಶಿಲೆಗಳು ಮರುಭೂಮಿ ವಾಯುಗುಣವಿದ್ದುದರ ಬಗ್ಗೆ ಸೂಚನೆ ನೀಡುತ್ತವೆ. 

	ಆರ್ಥಿಕ ನಿಕ್ಷೇಪಗಳು: 1. ವಜ್ರಗಳು: ಅನೇಕ ಶತಮಾನಗಳಿಂದ ವಿಂಧ್ಯ ಮತ್ತು ಕರ್ನೂಲ್ ಶಿಲಾಸ್ತೋಮಗಳಿಂದ ವಜ್ರಗಳನ್ನು ಹೊರತೆಗೆಯಲಾಗುತ್ತಿದೆ. ಇವು ವಿಂಧ್ಯ ಶಿಲಾಸ್ತೋಮಗಳ ವಜ್ರಭರಿತ ಗುಂಡುಶಿಲೆಗಳು ಹಾಗೂ ಕರ್ನೂಲ್ ಶಿಲಾಶ್ರೇಣಿಯ ಬಂಗನಪಲ್ಲಿ ಮರಳುಶಿಲೆಗಳಲ್ಲಿ ದೊರೆಯುತ್ತವೆ. ಈ ಶಿಲೆಗಳಲ್ಲಿ ವಜ್ರಗಳ ಉಗಮ ಆದದ್ದು ಹೇಗೆ ಎಂಬುದು ತಿಳಿದಿಲ್ಲ. ವಜ್ರಗಳಿಗೆ ಮಧ್ಯಭಾರತದ ಪನ್ನಾ, ಒರಿಸ್ಸದ ಸಂಬಲ್‍ಪುರ, ಅನಂತಪುರ ಜಿಲ್ಲೆಯ ವಜ್ರಕರೂರ್ ಪ್ರಸಿದ್ಧ ಸ್ಥಳಗಳು. ವಜ್ರಕರೂರ್ ಎಂಬಲ್ಲಿಯ ಜ್ವಾಲಾಮುಖಿಯ ಕಂಠ ಮತ್ತು ಬಿಜವಾರದ ಟ್ರಾಪ್‍ಶಿಲೆಗಳೇ ವಜ್ರಗಳಿಗೆ ಮೂಲಸ್ಥಾನವಾಗಿರ ಬೇಕೆಂದು ಸೂಚಿತವಾಗಿದೆಯಾದರೂ ಅಲ್ಲೆಲ್ಲೂ ಈ ತನಕ ವಜ್ರಗಳು ದೊರಕಿಲ್ಲ. 

	2. ಸುಣ್ಣ ಶಿಲೆಗಳು: ಕರ್ನೂಲ್ ಶಿಲಾಶ್ರೇಣಿಯ ನರ್ಜಿ ಎಂಬ ನೆಲೆ ಸುಣ್ಣಶಿಲೆಯ ಅತ್ಯುತ್ತಮವಾದ ಕಟ್ಟಡಶಿಲೆಗಳು ಮತ್ತು ಅಮೃತಶಿ ಲೆಗಳನ್ನು ಒದಗಿಸುತ್ತದೆ. ಇವು ಅಲಂಕಾರಶಿಲೆಗಳಾಗಿಯೂ ಬಳಕೆ ಯಲ್ಲಿವೆ. ಸುಣ್ಣಶಿಲೆಗಳನ್ನು ಮುಖ್ಯವಾಗಿ ಸುಣ್ಣ ಮತ್ತು ಸಿಮೆಂಟ್ ತಯಾರಿಕೆಗೆ ಉಪಯೋಗಿಸುತ್ತಾರೆ. 

	3. ಸ್ಲೇಟುಶಿಲೆಗಳು: ಕಡಪಶಿಲೆಯನ್ನು ಯರ್ರಗುಂಟ್ಲ, ಜಮ್ಮಲಮಡಗು ಮತ್ತು ಬೇತಂಚರ್ಲ ಎಂಬ ಸ್ಥಳಗಳಲ್ಲಿ ಹೊರತೆಗೆಯುತ್ತಾರೆ. ಇವನ್ನು ಹಾಸುಗಲ್ಲು ಮತ್ತು ಮಾಳಿಗೆಗಳಿಗೆ ಬಳಸುವುದಿದೆ. ಈ ಶಿಲಾ ಸಮುದಾ ಯದಲ್ಲಿ ಸಿಕ್ಕುವ ಸುಣ್ಣಶಿಲೆಯನ್ನು ತಾಜ್‍ಮಹಲ್ ಕಟ್ಟಡದಲ್ಲಿ ಒಳ ಅಲಂಕಾರಕ್ಕೆ ಬಳಸಿಕೊಳ್ಳಲಾಗಿದೆ. ಕೃಷ್ಣಾನದಿ ತೀರದಲ್ಲಿರುವ ಅಮರಾವತಿ ಬೌದ್ಧವಿಹಾರವನ್ನು ಕಟ್ಟಲು ಪಾಲ್‍ನಾಡ್ ಸುಣ್ಣಶಿಲೆಯನ್ನು ಬಳಸಲಾಗಿದೆ.

	4. ಮರಳುಶಿಲೆಗಳು: ವಿಂಧ್ಯಶಿಲಾಸ್ತೋಮದ ಮರಳುಶಿಲೆಗಳು ಸಮಕಣದಿಂದ ಕೂಡಿ ಆಕರ್ಷಕ ಬಣ್ಣಗಳನ್ನು ಪ್ರದರ್ಶಿಸುತ್ತವೆ. ಇವಕ್ಕೆ ಬೇಕಾದ ರೂಪವನ್ನು ಸುಲಭವಾಗಿ ಕೊಡಬಹುದು. ಆದ್ದರಿಂದ ಇವನ್ನು ಇತಿಹಾಸ ಪ್ರಸಿದ್ಧವಾದ ಚುನಾರ್, ಆಗ್ರ, ದೆಹಲಿ, ಲಾಹೋರ್, ಜೋಧ್‍ಪುರ್, ಫತೇಪುರ ಸಿಕ್ರಿ ನಗರ ಮುಂತಾದ ಕಡೆಗಳಲ್ಲಿಯ ಬೌದ್ಧ ವಿಹಾರಗಳ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ.
												(ಡಿ.ಆರ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ